ಫ್ರ್ರಾಸಾ, ಜೀನ್ 1337-ಸು.1410, 14ನೆಯ ಶತಮಾನದ ಅತಿಶ್ರೇಷ್ಠ ಇತಿಹಾಸಕಾರ, ವಿ. ತನ್ನ ಬಖೈರುಗಳಲ್ಲೂ ಪದ್ಯಗಳಲ್ಲೂ ಸ್ವಂತ ವಿಚಾರ ಸ್ವಲ್ಪ ಹೇಳಿಕೊಂಡಿದ್ದಾನೆ. ಹುಟ್ಟಿದ್ದು ವಾಲೆನ್ಸಿಯನ್ ನಗರದಲ್ಲಿ. ಅಲ್ಲಿನ ಸುಂದರ ಪ್ರಾಕೃತಿಕ ಸನ್ನಿವೇಶ ಐತಿಹಾಸಿಕ ಅವಶೇಷಗಳು ಹಾಗೂ ಘಟನೆಗಳು ಇವನ ಮನಸೆಳೆದುವು. ಕುಶಲ ಕ್ರೀಡೆಗಳೂ ಹುಸಿ ಕಾಳಗಗಳೂ ಈತನಿಗೆ ಬಹು ಪ್ರಿಯವಾದುವು. ಪಾಠ ಪ್ರವಚನದಲ್ಲಿ ಹಿಂದೆ ಬಿದ್ದ; ವರ್ಷ ವರ್ಷವೂ ಪ್ರದರ್ಶಿಸುತ್ತಿದ್ದ ನಾಟಕ ಉತ್ಸವ ಮೆರವಣಿಗೆ ಮುಂತಾದುವುಗಳಲ್ಲಿ ಉಲ್ಲಾಸ ತೋರಿದ. ಎಲ್ಲಕ್ಕೂ ಮೇಲಾಗಿ ಕುದುರೆಮಲ್ಲರ ಕ್ರೀಡಾ ಸಂಗ್ರಾಮ ಭಾರಿ ಆಕರ್ಷಣೆಯಾಗಿತ್ತು.

ಇವನೇ ಹೇಳಿರುವಂತೆ ಹುಟ್ಟಿದ ಮೇಲೆ ನಾಲ್ಕು ವರ್ಷ ಚಂದ್ರನ ಆಧಿಪತ್ಯಕ್ಕೆ ಮನುಷ್ಯ ಅಧೀನ. ಅನಂತರ ಹತ್ತು ವರ್ಷ ಬುಧನ ಆಧಿಪತ್ಯಕ್ಕೆ, ತರುವಾಯ ವೀನಸ್ಸಳ (ಶುಕ್ರ) ಆಧಿಪತ್ಯಕ್ಕೆ. ಫ್ರಾಸಾಗೆ 14 ತುಂಬಿದ ಕೂಡಲೆ ವೀನಸ್ ಅವನ ಕನಸಿನಲ್ಲಿ ಕಾಣಿಸಿಕೊಂಡು. ರೂಪವತಿಯೂ ಕುಲೀನಳೂ ವಿನಯಶೀಲಳೂ ಆದ ಯುವತಿಯೊಬ್ಬಳ ಪ್ರಣಯ ಸೇವಕನಾಗುತ್ತೀಯೇ ಎಂದು ಹರಿಸಿದಳಂತೆ. ಉದರ ಪೋಷಣೆಗಾಗಿ ವ್ಯಾಪಾರಿಯೊಬ್ಬನ ಊಳಿಗಕ್ಕೆ ಸೇರಿಕೊಂಡ. ಆ ಕೆಲಸ ಬೇಗ ಅಸಹ್ಯಕರವಾದಾಗ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಂಡು ಪದ್ಯಕಲೆಯ ತಂತ್ರವನ್ನು ಕಲಿತು ಲೇಖಕನಾದ. ಸುಂದರಿಯೂ ಶ್ರೀಮಂತಳೂ ಉಚ್ಚ ಕುಲದವಳೂ ಆದ ಯುವತಿಯೊಬ್ಬಳಿಗೆ ಮಾರುಹೋದ. ತನ್ನ ಪ್ರಣಯಗೀತೆಯನ್ನು ಅವಳಿಗೆ ಅರ್ಪಿಸಿದ; ಇಂಗ್ಲೆಂಡಿಗೆ ಹೋಗಿ ರಾಣಿ ಫಿಲಿಪ್ಪಾಳ ಆಶ್ರಯ ಪಡೆದ. ಇವನ ಪ್ರಣಯದ ಗುಟ್ಟನ್ನು ತಿಳಿದು ಆಕೆ ಅದರ ಮುಂದುವರಿಕೆಗೆ ನೆರವು ನೀಡಿದಳು. ಆದರೆ ಆ ಪ್ರಣಯ ಅವನಿಗೆ ಲಭಿಸಲಿಲ್ಲ.

ಅಗಲಿಕೆಯ ನೋವನ್ನು ತಗ್ಗಿಸಿಕೊಳ್ಳುವುದಕ್ಕಾಗಿ ಫ್ರ್ರಾಸಾ ದೇಶಪರ್ಯಟನ ಕೈಗೊಂಡ. ಅವಿಗ್ನಾನಿಗೆ ಹೋಗಿ ಅನಂತರ ಪ್ಯಾರಿಸ್ಸಿಗೆ ನಡೆದು ಐದು ವರ್ಷದ ತರುವಾಯ ಇಂಗ್ಲೆಂಡಿಗೆ ಹಿಂತಿರುಗಿದ, ತಾನೇ ರಚಿಸಿದ್ದ ಪದ್ಯ ಬಖೈರನ್ನು ಫಿಲಿಪ್ಪಾಗೆ ಒಪ್ಪಿಸಿದ, ಅದರ ವಿಷಯ ಆಗ ಜರುಗುತ್ತಿದ್ದ ಯುದ್ಧದ ಯಾವುದೋ ಒಂದು ಕಾಳಗ, ಆಸ್ಥಾನದಲ್ಲಿ ಹಾಯಾಗಿ ಕಾಲ ಕಳೆಯುವ ಇಷ್ಟ ಅವನಿಗಿತ್ತೊ ಇಲ್ಲವೊ, ಅಂತೂ ವಿಷಯ ಸಂಗ್ರಹಣೆಗಾಗಿ ರಾಣಿ ಅವನನ್ನು ಪುನಃ ಕಳಿಸಿಕೊಟ್ಟಳು. ಸ್ಕಾಟ್ಲೆಂಡಿಗೆ ಪಯಣ ಮಾಡಿ ಅನೇಕ ವೀರರ ಸ್ನೇಹ ಸಂಪಾದಿಸಿ ಸಾಹಸ ಕಾರ್ಯಗಳ ವಿವರಗಳನ್ನು ಅರಿತುಕೊಂಡ, ಹಿಂತಿರುಗುವಾಗ ಪ್ರಾಚೀನ ರೋಮನ್ ಗೋಡೆಯ ಮಾರ್ಗವಾಗಿ ಬಂದು ಅನೇಕ ಹಳೆಯ ಅವಶಿಷ್ಟಗಳ ಸ್ವಂತ ಪರಿಚಯಗಳಿಸಿದ. ಲಂಡನ್ನಿಗೆ ಬಂದು ಫ್ರಾನ್ಸಿನ ದೊರೆಗೆ ಕಾರ್ಯದರ್ಶಿಯಾದ. ರಾಣಿ ಫಿಲಿಪ್ಪಾಳಿಂದ ಸಾಧಾರಣ ವೀರನವರೆಗೆ ಎಲ್ಲರೂ ತಮ್ಮ ಸ್ವಂತಾನುಭವವನ್ನು ಮುಚ್ಚುಮರೆಯಿಲ್ಲದೆ ನಡೆದದ್ದನ್ನು ನಡೆದಂತೆ ವರ್ಣಿಸಿ ಉಪಕಾರ ಮಾಡಿದರು. ಕಾಳಗದ ವಿದ್ಯಮಾನವನ್ನು ಎರಡೂ ಕಡೆಯವರಿಂದ ಕೇಳಿ ತಿಳಿದುಕೊಳ್ಳಬೇಕೆಂಬ ಹಂಬಲ ಅವನಲ್ಲಿ ಬಲವಾಗಿತ್ತು. ಸಣ್ಣಪುಟ್ಟ ವಿವರವನ್ನು ಅರಿಯಲೂ ಹಾತೊರೆದ.

1366ರಲ್ಲಿ ಬ್ರಸೆಲ್ಸಿಗೆ ಹೋಗಿ ಲಾವಣಿಕಾರರ ಸಮ್ಮೇಳನದಲ್ಲಿ ಭಾಗವಹಿಸಿ ಸನ್ಮಾನ ಪಡೆದ. ಅಲ್ಲಿಂದ ಬ್ರಿಟನ್ ಮಿಲಾನ್ ಬೊಲೋನ ರೋಮ್‍ಗಳಿಗೆ ಪ್ರಯಾಣ ಮಾಡಿದ. ರಾಣಿ ಫಿಲಿಪ್ಪಾ ಸತ್ತುಹೋದಳು. ಬ್ರಾಬಾಂಟಿಗೆ ಹೋಗಿ ಡಚೆಸ್ಸಳ ಪರಿವಾರದವನಾದ. ಕ್ರಮೇಣ ಗು ಇ ಡ ಬ್ಲುವ ಎಂಬ ರಾಜಕುಮಾರನ ಸ್ನೇಹ ಸಿಕ್ಕಿತು. ಆತ ದಳನಾಯಕನಾಗಿ ಹಲವು ದೊಡ್ಡ ಕದನಗಳಲ್ಲಿ ಪಾತ್ರವಹಿಸಿ ವಿಶ್ರಾಂತಿಗಾಗಿ ತನ್ನ ಬೋಮಾಂಟ್ ದುರ್ಗದಲ್ಲಿ ವಾಸಿಸಲು ಬಂದಿದ್ದ. ಆತನಿಂದಲೂ ಆತನ ಮಾವ ಡರಾಬರ್ಟ್ ನಾಮೂರನಿಂದಲೂ ಅನೇಕ ಸಂಗತಿಗಳನ್ನು ತಿಳಿದ. ಆ ಕಾಲದ ಯುದ್ಧದ ಆಗುಹೋಗುಗಳನ್ನು ಗದ್ಯರೂಪದಲ್ಲಿ ಬರೆದಿಡಲು ಮನಸ್ಸುಮಾಡಿ ವಿಶೇಷ ಪ್ರಖ್ಯಾತಿಗಳಿಸಿದ. ಬಖೈರು ರಚನೆಯಲ್ಲಿ ಶ್ರದ್ಧೆಯಿಂದ ನಿರತನಾದ.

ಹನ್ನೆರಡು ವರ್ಷ ಬಿಡುವಿಲ್ಲದೆ ಇತಿಹಾಸ ರಚನೆ ಮಾಡಿದ. 1386ರಲ್ಲಿ ಡ್ಯೂಕ್ ಬೆರ್ರಿಯ ಪರಿವಾರಕ್ಕೆ ಸೇರಿ ಇಂಗ್ಲೆಂಡಿನ ಮೇಲಣ ದಂಡಯಾತ್ರೆಗಾಗಿ ಮಾಡುತ್ತಿದ್ದ ಪ್ರಚಂಡ ಸನ್ನಾಹವನ್ನು ಕಣ್ಣಾರೆ ವೀಕ್ಷಿಸಲು ಸ್ಲೂಇಸ್ ಬಂದರಿಗೆ ಹೋದ. ಫ್ಲಾಂಡರ್ಸಿಗೆ ಪಯಣಿಸಿ ವೀರರನ್ನೂ ವರ್ತಕರನ್ನೂ ಭೇಟಿಮಾಡಿ ಸುದ್ದಿಸಂಪಾದಿಸಿದ. ಫ್ಲೆಮಿಷ್ ಜನರ ಕಷ್ಟನಷ್ಟಗಳಿಗೆ ಮರುಗಿ ಅವುಗಳನ್ನು 300 ಪುಟದಷ್ಟು ವರ್ಣಿಸಿದ. ಆ ಸರಹದ್ದಿನಲ್ಲಿ ತಿಳಿದುಕೊಳ್ಳಬೇಕಾದ ಹೊಸ ಸಂಗತಿ ಏನೂ ಇಲ್ಲದೆ ಹೋದದ್ದರಿಂದ ಫ್ರಾನ್ಸಿನ ದಕ್ಷಿಣ ಭಾಗಕ್ಕೆ ತೆರಳಲು ಸಂಕಲ್ಪ ಮಾಡಿದ. ಎಸ್ಪೇಂಗ್ ಡ ಲಿಯಾನ್ ಎಂಬ ವೀರ ಅವನಿಗೆ ಸಹಚರನಾಗಿ ನಾನಾ ಘಟನೆಗಳನ್ನು ರಸವತ್ತಾಗಿ ಬಣ್ಣಿಸಿದ. ಆಥೆನ್ಸಿಗೆ ಹೋಗಿ ಅಲ್ಲಿನ ನಾಡಪ್ರಭು ಕೌಂಟ್ ಗ್ಯಾಸ್ಟಸ್ ಫೀಬಸ್ಸನ ಆಸ್ಥಾನದಲ್ಲಿ ಕಥೆ ಕೇಳುತ್ತ ಕಾವ್ಯ ಓದುತ್ತ ಹಲವು ತಿಂಗಳು ಹರ್ಷದಿಂದಿದ್ದ. ತನ್ನ ಮೇರುಕೃತಿಯ ಮೂರು ಸಂಪುಟಗಳನ್ನು ಬರೆದು ಮುಗಿಸಿದ.
ವಾಲೆನ್ಸಿಯೆನ್ನಿಗೆ ಹಿಂದಿರುಗಿ ನಾಲ್ಕನೆಯ ಸಂಪುಟದ ನಿರ್ಮಾಣದಲ್ಲಿ ಮಗ್ನನಾದ. ಅದು ಎರಡನೆಯ ರಿಚರ್ಡನ ಹತ್ಯೆಯಿಂದ ಅಂತ್ಯವಾಗುತ್ತದೆ.

ಫ್ರಾಸಾ ತನ್ನ ಕೊನೆಯ ದಿನಗಳನ್ನು ತೀರ ಬಡತನದಲ್ಲಿ ನೂಕಿದ. ಫ್ರಾಸಾ ಅನೇಕ ಪದ್ಯ ಕಾವ್ಯಗಳನ್ನೂ ಬರೆದ. ತನ್ನ ಗದ್ಯಕ್ಕಿಂತಲೂ ಪದ್ಯ ಉತ್ಕøಷ್ಟವೆಂದು ತಾನೇ ಹೇಳಿಕೊಂಡಿದ್ದಾನಾದರೂ ಗದ್ಯದಲ್ಲಿರುವ ಸ್ಫುಟ ವರ್ಣನೆ ಕಥನ ಜಾಣ್ಮೆ ವ್ಯಕ್ತಿಚಿತ್ರಣ ಇವುಗಳಲ್ಲಿ ಸ್ವಲ್ಪಭಾಗವೂ ಪದ್ಯದಲ್ಲಿ ಗೋಚರಿಸದು. ಅಲ್ಲದೆ ಗದ್ಯದಲ್ಲಿ ಉತ್ಕøಷ್ಟ ಸಾಹಿತ್ಯವಾಗಬಲ್ಲ ಅನೇಕ ಪ್ರಕರಣಗಳಿವೆ.   
      (ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ